ಭಾನುವಾರ, ಸೆಪ್ಟೆಂಬರ್ 15, 2013

ಮಧುರ ಪಲ್ಲವಿಯೊಂದಿಗೆ ನಿನ್ನ ನೆನಪು

ನೀನೇ ಬರಿ ನೀನೇ...

ನಿನದೆ ಧ್ವನಿಯು ನಿನದೆ ಪ್ರತಿಧ್ವನಿಯು ಎಂದು ನಿನಗೆಂದೆ ಎಂದೋ ಬರೆದ ಕವಿತೆಯ ನೆನಪಷ್ಟೆ. ನೀನು ಗುನುಗುತಿದ್ದ ಪ್ರತಿ ಹಾಡುಗಳ ಪಲ್ಲವಿಯಲ್ಲು ನಿನ್ನ ನೆನಹುಗಳು ಮಾತ್ರ. ಎಲ್ಲೆಲ್ಲಿಂದಲೊ ಸಿಹಿ ಗಾಳಿಯಲ್ಲಿ ತೇಲಿಬರುವ ಹಾಡುಗಳಲ್ಲೇ ನಿನ್ನ ರೂಪ, ಲಾವಣ್ಯ, ವೈಯಾರ, ಹಾಗೆಯೇ ಕಣ್ಣ ಮುಂದೆ ಸಹಿ ಹಾಕಿದೆ ಮನಸಿನಲಿ.
ಮಿರ ಮಿರ ಮಿಂಚಿ ಮಿನುಗುವ ತುಂಬು ಹುಣ್ಣಿಮೆಯ ನಯನಗಳು, ಪಳ ಪಳ ಹೊಳೆಯುವ ಬೆಳ್ಳಿಚುಕ್ಕಿಯ ಮೂಗು ಬಟ್ಟು, ಘಂ ಎಂದು ಗಮಗಮಿಸುವ ಪರಿಮಳದ ಮಲ್ಲಿಗೆ ಮೊಗ್ಗಿನ ದಂಡೆ, ಕಣ್ಕುಕ್ಕುವ ಎದೆಯಂಕುರ, ಕೋರೈಸುವ ನಿತಂಬ, ಬೆಳ್ಳಂಬೆಳಗೆ ನನ್ನ ಸನಿಹ ಬಂದು ತಾಗಿ ಕೂತಾಗ ಪುಳಕಗೊಳಿಸುವ ನುಣುಪು ಮೈ ಎಂದೆಂದೂ ಮಾಸದ ನೆನಪು.
ಕಾಲೇಜಿನ ಕ್ಯಾಂಟೀನ್‌ನಲ್ಲಿ ನನಗಾಗಿ ನಿನ್ನ ಗೆಳತಿಯರೊಂದಿಗೆ ಕಾಯ್ತ ಕೂತ್ಕೊಂಡು ನಿನ್ನ ನೋಡಲೆಂತು, ಮಾತನಾಡಲೆಂತು, ಮನಸ ಕೇಳಲೆಂತು ಪ್ರೀತಿ ಹೇಳಲೆಂತು ಹಾಡನ್ನ ನಾ ಬರುವುದನ್ನೇ ನೋಡಿ ಮೊಬೈಲ್‌ನಲ್ಲಿ ಪ್ಲೇ ಮಾಡುತಿದ್ದ ದಿನಗಳು ಸದಾ ಕಾಡತ್ತಿವೆ. ನೀನು ಕಾಲೇಜಿಗೆ ಬ್ಯೂಟಿ ಕ್ವೀನ್ ಅಂತ ಎಲ್ಲಾ ಹುಡುಗರು ನಿನ್ನ ಮಿಸ್ ಕಾಲೇಜ್ ಎಂದು ಕರೀತಾ ಇದ್ದರು. ನನ್ನ ನೀನು ಪ್ರೀತಿಸ್ತಿದ್ದೀಯ ಅಂತ ಗೊತ್ತಾಗಿದ್ದೆ ತಡ ಎಲ್ಲಾ ಫ್ರೆಂಡ್ಸ್ ನೀನು ಕ್ಯಾಂಪಸ್‌ನ ಒಳಗೆ ಬರುತ್ತಿದ್ದಂತೆ ಮಗ ನಿನ್ನ ಡ್ರೀಮ್ ಗರ್ಲ್ ಬರ‍್ತಿದ್ದಾಳೆ ನೋಡೊ ಅನ್ನುತ್ತಿದ್ದರು. ನಿನ್ನ ಕಡೆ ನೋಡಿದ ಕೂಡಲೆ ಕಣ್ಣುಬ್ಬು ಹಾರಿಸಿ ಹಾಯ್ ಅಂತ ಕರೆದ ಧ್ವನಿಗಳು ಇನ್ನು ಹಾಗೆನೇ ನನ್ನದೆಯಲ್ಲಿ ಮೊಳುಗುತ್ತಲಿವೆ. ನಿನ್ನ ಗೆಳತಿಯ ಜೊತೆಗೆ ನನ್ನ ಹತ್ತಿರ ಬಂದು ನೀನು ಪೀತಿ ನಿವೇದಿಸಿದ್ದು, ನಾ ತುಂಬ ದಿನ ಸತಾಯಿಸಿದ್ದು, ನಿನ್ನ ಗೆಳತಿಯರೆಲ್ಲ ಒಳ್ಳೆಯ ಹುಡುಗಿ ಎಂದು ನನ್ನ ಒತ್ತಾಯಿಸಿದ್ದು ಎಲ್ಲಾ ನೆನಪುಗಳು ಇಂದು ನನಗೆ ಗಗನಲತೆ.
ಜೋರು ಮಳೆಯಲಿ ಛತ್ರಿ ತಂದಿದ್ರೂ ಬ್ಯಾಗ್ ಒಳಗೆ ಇಟ್ಕೊಂಡು ಬಸ್ ಸ್ಟಾಪ್‌ವರೆಗೆ ಬಿಟ್ಟು ಬಾ ಅಂತ ಕೇಳಿದ್ದೆ. ಮಧ್ಯ ದಾರಿಯಲ್ಲಿ ಮುಂಗಾರು ಮಳೆಯೇ ಎನು ನಿನ್ನ ಹನಿಗಳಲೀಲೆ ಮ್ಯೂಸಿಕ್ ಪ್ಲೇ ಮಾಡಿದಾಗ ನಿನ್ನ ಹೆಗಲ ಮೇಲೆ ಕೈಹಾಕಿ ಹತ್ತಿರಕ್ಕೆ ಎಳೆದುಕೊಂಡಿದ್ದೆ. ಚಿನ್ನು, ನನ್ನ ಯಾಕೆ ಇಷ್ಟ ಪಟ್ಟೆ ಅಂತ ಪ್ರಶ್ನಿಸಿದ್ದಕ್ಕೆ ಇಷ್ಟನೋ ಇಷ್ಟನೋ ನಿ ನಂಗೆ ಇಷ್ಟನೋ, ಕಷ್ಟನೋ ಕಷ್ಟನೋ ನಿ ಇಲ್ದೆ ಕಷ್ಟನೋ ಸಾಂಗ್ ಪ್ಲೇ ಮಾಡಿ ಬಾಯಿ ಮುಚ್ಚಿಸಿದ್ದೆ. ಆದ್ರೂ ಒತ್ತಾಯ ಮಾಡಿ ಕೇಳಿದ್ದಕ್ಕೆ ನಿನ್ನ ಡೀಸೆನ್ಸ್, ಪೋಲಿ ಬರಹ, ಕಂಜೂಸ್ ಬುದ್ದಿ, ಕಿತ್ತೋಗಿರೊ ಪ್ಯಾರಗಾನ್ ಚಪ್ಪಲಿ, ಮೇಕೆ ಗಡ್ಡ ಮತ್ತೆ ಒಂಥರ ಪುಸ್ತಕದ ಹುಚ್ಚ ಅದ್ಕೆ ಇಷ್ಟಪಟ್ಟೆ ಅಂದಿರುವ ಮಾತು ನೆನಪಿದೆ. ಕಿವಿ ಮೇಲೆ ಬೀಳುವ ಪ್ರತಿ ಯುಗಳಗೀತೆಯಲ್ಲಿಯು ನಿನ್ನ ಪದಪು ಚಿಮ್ಮುತ್ತದೆ ಕಾರಂಜಿಯಂತೆ. ಶಂಕರ್ ನಾಗ್ ಅಭಿನಯದ ಸಿಬಿಐ ಶಂಕರ್ ಚಿತ್ರದ ಗೀತಾಂಜಲಿ ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ, ಪುಷ್ಪಾಂಜಲಿ ತೊಂಡೆಹಣ್ಣಿಗೆ ಬಾಳೆದಿಂಡಿಗೆ ದಾಳಿಂಬೆಹಣ್ಣಿಗೆ ಗೀತೆ ಕೇಳಿದಾಗಾಂತು ನಿನ್ನ ನೆನೆಯದ ಕ್ಷಣವಿಲ್ಲ. ಕಾರಿಡಾರಿನ ಮೇಲಿನ ಹಡೆ ಮಾತುಗಳು, ತಮಾಸೆಯ ಚಟಾಕಿಗಳು, ಮಾತಿನ ಮದ್ಯ ನಿನ್ನ ಓರೆ ನೋಟಗಳು, ಸುತ್ತಿದ ಮರಗಳು, ಇಂಗ್ಲೀಷ್ ಲೆಕ್ಚರ್‌ಗಳ ಕಣ್ಣು ತಪ್ಪಿಸಿ ಓಡಾಡಿದ ಸಮಯಗಳು, ಎಲ್ಲಾ ಮರೆಯಲಾದೀತೆ?
 ಕಾಲೇಜ್ ಯೂನಿಯನ್ ಡೇನಲ್ಲಿ ನಾ ನಿನ್ನ ಜಾನಪದ ನೃತ್ಯಕ್ಕಾಗಿ ನಿನ್ನ ಮುಖಕ್ಕೆ ಬಣ್ಣ ಹಚ್ಚುವಾಗ ಬಣ್ಣ ನನ್ನ ಒಲವಿನ ಬಣ್ಣ ನನ್ನ ಬದುಕಿನ ಬಣ್ಣ ನನ್ನೆದುರು ಹಾಡಿ ಉನ್ಮತ್ತಗೊಳಿಸಿದ್ದೆ. ನನ್ನಿಷ್ಟದ ಹಾಡು ಅಂತಾನೆ ನೀವು ನವ್ವಾಲೆ ಬಂತಪ್ಪ ನವ್ವಾಲೆ, ಸೋಗೆಯ ಬಣ್ಣದ ನವ್ವಾಲೆ ಡ್ಯಾನ್ಸ್‌ಗೆ ಹೆಜ್ಜೆ ಹಾಕೋಕೆ ಅಯ್ಕೆ ಮಾಡಿದ್ದು. ನೃತ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮೆರೆಯಲಾರದ್ದು.
ಒಂದಿನ ನನ್ಮೇಲೆ ಕವಿತೆ ಬರಿ ಅಂದ ತಕ್ಷಣ ಚಂದಿರನೊಬ್ಬನೆ ಅಂಬರದೊಳಗೆ, ಸುಂದರಿ ನೀನೆ ನನ್ನೆದೆಯೊಳಗೆ. ನನ್ನನು ಆಳಿದ ಬೊಂಬೆಯು ನೀನೆ, ನಿನ್ನನು ಗೆದ್ದ ತುಂಟನು ನಾನೆ. ಅಂತ ನಾಲ್ಕೆ ಪಂಕ್ತಿಯ ಕವನ ಬರೆದು ನಿನ್ನ ಕೈಗಿಟ್ಟ ಗಳಿಗೆ, ಜತೆಗೆ ನೀನಿಟ್ಟ ಚಂದುಟಿಯ ಸವಿ ಮುತ್ತುಗಳು, ಬಳಸಿ ನಿಂತ ತೋಳ ಬಂದಿ, ಬಿಗಿದಪ್ಪಿ ಹಿಡಿದ ದೇಹಸಿರಿ ಎಂದು ಮರೆಯದ ಕಲ್ಪನಾ ವಿಲಾಸ. ಸ್ನೇಹ ಮಾಡಬೇಕಿಂತವಳ, ಸ್ನೇಹ ಮಾಡಬೇಕಿಂತವಳ, ಒಳ್ಳೆ ಮೋಹದಿಂದಲಿ ಬಂದು ಕೂಡುವಂತವಳ ಸುರತಗಾನದಲ್ಲಿ ಮುಳುಗಿದ ಹಸಿ ಹಸಿ ನೆನಪಿನಂಗಳದ ಚಿತ್ತಾರಗಳು. ಡಿಗ್ರಿ ತರಗತಿಯ ಮೂರು ವರುಷಗಳು ನಿಮಿಷಗಳಾಯ್ತು ನಿನ್ನೊಲವ ಪರಿಮಳದಿಂದ.
.......ಕಾಲೇಜಿನ ಕೊನೆಯ ದಿನ ಬಂದೆ ಬಿಡ್ತು.
ಮನಸ್ಸು ಏಕೋ ಭಾರ, ಅರಿವಿಲ್ಲದೆ ಕಣ್ಣನ್ನು ವ್ಯಾಪಿಸಿದ ಅಶ್ರು ಬಿಂದುಗಳು, ಎನೋ ವೇಧನೆ, ಉಮ್ಮಳಿಸಿ ಬರುವ ನಿಟ್ಟುಸಿರು.
ಸಂದರ್ಭೋಚಿತವಾಗಿ ವಿಧಾಯ ಗೀತೆಯೆಂಬಂತೆ ಅರಳುತಿರು ಜೀವದ ಗೆಳಯ ಸ್ನೇಹದ ಸಿಂಚನದಲ್ಲಿ, ಬಾಡದಿರು ಸ್ನೇಹದ ಹೂವೇ ಪ್ರೇಮದ ಬಂಧನದಲ್ಲಿ, ಮನಸಲ್ಲಿ ಇರಲಿ ಭಾವನೆ, ಮಿಡಿಯುತಿರಲಿ ಮೌನವೀಣೆ ಹೀಗೆ ಸುಮ್ಮನೆ ಎಂದು ಬಸ್ ಮೇಲೆ ನಿನ್ನೊಂದಿಗೆ ಕೇಳಿದ ಕೊನೆಯ ಹಾಡಿನಲ್ಲಿ ಮನಸ್ಸಿನ ಪ್ರತಿಕೋಣೆಯಲ್ಲೂ ಪಿಸುಗುಡುತ್ತಲೆ ಇರುತ್ತೀಯ. ನಮ್ಮ ಪೀತಿ ಅಮರವಾಗಬೇಕೇಂಬ ಹೆಬ್ಬಯಕೆ ಕೀಲು ಕಿತ್ತ ಗಾಡಿಯಾಗಿದ್ದು ಭವಿಷ್ಯದ ನಮ್ಮಿಬ್ಬರ ದಾರಿಗಳು ಕವಲುಗಳಾದಾಗ. ಆದರೂ ಕೂಡ ಮರೆಯಲಾಗದ ಮಧುರ ಗೀತೆಯ ಪಲ್ಲವಿಯಂತೆ ಮತ್ತೆ ಮತ್ತೆ ಪ್ರತಿಧ್ವನಿಸುತ್ತೀಯ ಅದೇ ರಾಗದಲ್ಲಿ, ಅನುರಾಗದಲ್ಲಿ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ